ಮೈಲಾರ		
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಯ ದಂಡೆಯ ಮೇಲಿರುವ ಪ್ರಸಿದ್ಧ ಯಾತ್ರಾಸ್ಥಳ. ಹಡಗಲಿನಿಂದ ನೈಋತ್ಯಕ್ಕೆ 33 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 1990 (1981). ಇಲ್ಲಿ ಶಿವಮಲ್ಲಾರಿಯ ದೇವಾಲಯವಿದೆ. ಇಲ್ಲಿಯ ಶಿವಲಿಂಗ ಉದ್ಭವ ಲಿಂಗವೆಂದೂ ಮೈಲಾರ ಅಥವಾ ಮಲ್ಲಾರಿಯ ಮೂರ್ತಿ ಮಣ್ಣಿನದೆಂದೂ ಹೇಳಲಾಗಿದೆ. 12 ನೆಯ ಶತಮಾನದ ಕನ್ನಡ ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ಮೈಲಾರನ ಭಕ್ತನಾದ ಗೊರವರ ಉಲ್ಲೇಖಗಳಿವೆ.

13ನೆಯ ಶತಮಾನದ ಅನಂತರ ಮತ್ತು 16ನೆಯ ಶತಮಾನದೊಳಗೆ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಮಾಳವ ಮತ್ತು ಆಂಧ್ರ ಪ್ರದೇಶಗಳಲ್ಲಿ ಮೈಲಾರಲಿಂಗ, ಮಲ್ಲಾರಿ, ಮಾರ್ತಾಂಡ, ಭೈರವ, ಖಂಡೋಬ ಮುಂತಾದ ಹೆಸರುಗಳನ್ನು ಪಡೆದು ತನ್ನ ಪತ್ನಿ ಮಾಳಚಿ (ಮಾಹಿಳಾದೇಯೊದಿಂವಿಗೆ) ಜನಪ್ರಿಯಗೊಂಡ ಗ್ರಾಮದೇವತೆ. ಕಾಲಾಂತರದಲ್ಲಿ ವಿವಿಧ ಮತಪಂಥಗಳ ಆರಾಧ್ಯದೇವತೆಯಾಗಿರಬೇಕು. ಶಿವನ ಅವತಾರವೆಂದು ಹೇಳುವ ಮೈಲಾರನ ಮಹಿಮೆ ಬಣ್ಣಿಸುವ ಪುರಾಣ ರೂಪದ ಗ್ರಂಥಗಳೂ ರಚನೆಯಾದುವು. ಇವುಗಳಲ್ಲಿ ಮುಖ್ಯವಾದ್ದು ಮಲ್ಲಾರಿಮಹಾತ್ಮ್ಯ.
ಬ್ರಹ್ಮನ ವರಬಲದಿಂದ ಮದಿಸಿದ ಮಲ್ಲ ಮತ್ತು ಮಣಿ ಎಂಬ ದೈತ್ಯರ ಹಾವಳಿಯಿಂದ ದಿಕ್ಕೆಟ್ಟ ಋಷಿಗಳೂ ದೇವತೆಗಳೂ ಶಿವನ ಮೊರೆಹೊಕ್ಕಾಗ ಶಿವ ಆ ರಕ್ಕಸರನ್ನು ಹತ್ತು ದಿನಗಳ ಕದನದ ಅನಂತರ ಕೊಂದುದರಿಂದ ಇವನಿಗೆ ಮಲ್ಲಾರಿಯೆಂಬ ಹೆಸರಾಯಿತೆಂದು ಹೇಳಲಾಗಿದೆ.

ಇಲ್ಲಿ ಗೊರವರು ಅಪಾರ ಸಂಖ್ಯೆಯಲ್ಲಿ ನೆಲಸಿದ್ದಾರೆ. ಪ್ರತಿವರ್ಷ ಫೆಬ್ರುವರಿ ತಿಂಗಳಿನಲ್ಲಿ ನಡೆಯುವ ಜಾತ್ರೆ ಸುತ್ತಮುತ್ತಲ ಪ್ರದೇಶದ ಬಹು ಜನರನ್ನು ಆಕರ್ಷಿಸುತ್ತದೆ.									
  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ